Powered By Blogger

ಭಾನುವಾರ, ಸೆಪ್ಟೆಂಬರ್ 25, 2011

ಮತ್ತೆ ಶ್ರಾವಣ

೧ 
ಶ್ರಾವsಣಾ| ಶ್ರಾವಣಾ|
ಮೈದಂಡಿಗಿ ಮಾಡೀ| ಹಾಡಿದೀ ಕವನಾ|
ಕೈಲಾಸದ ಬುಡಕs ಸಿಕ್ಕವನಾ| ಹತ್ತು ತಲೆಯವನಾ
ಬಿಡಿಸೋ | ಹಿಡಿಸೋ | ಆತ್ಮಾ ರಾಮನ ಭವನಾ| ಶಿವನಾ 
ಹರ-ಹರಿ ಒಂದಾದವನಾ | ದವನಾ| ನೀಡಿದೆ| ಅಡಿಗೇ
ಚೈತ್ರದವನಾ | ಬೇರೆಲ್ಲೀ ಹವನಾ| ಪಂಪೀಯವನಾ
ಕೊಂಪೀಯವನನ್ನ ಬ್ಯಾಡಾ | ತುಂಗೀಗೆ | ಭದ್ರೀಗೆ|
ಸರಿ-ಸರಗೂಡಿಸಿ| ಹಾಡೋ ಕವನಾ| ಹಾಡಿದವನಾ
ಹರಹರ ಶ್ರಾವಣಕ ಬಂದಿs ಶ್ರುತಿ ತಂದಿss
ಹರಿಹರಿ ಶ್ರಾವಣಕ ಬಂದಿs| ಕೃತಿ ತಂದಿss
ನೀವು ತಂದೀ-ತಾಯಿ ನಮಗs
ಕಂದನು ನಾ ನಿಮಗs
ಸ್ಕಂದನ ಶಾಖೇ ನಮಗ | ನಾರದನ ಶಿಖೆ ನಮಗs
ಉದ್ದ ನಾಮಾ  | ಮತ್ತs ಅಡ್ಡs ನಾಮಾ
ಯಾವಿವನs ಕಾಮಾ ಬಂದಾ | ಶಿವ ಶಕ್ತಿ ನಡುವs
ಅಡುವs ಇಡರವನs

ವಸುದೇವs ದೇವಕಿ ಗರ್ಭಾ| ತುಂಬಿದ ತುಂಬಿ
ಸೆರೆ ಬಿಡಿಸಿ ಬಂದಿ | ವಿಶ್ವದ ತಂದಿ
ಸುರ-ಅಸುರರ ಕಸರs ಕಳೆದೂ 
ಮೈತಳೆದೂ ಬಾರಯ್ಯಾ
ಶ್ರಾವsಣಾ ಶ್ರವಣಕೆ ಭವಣೀಯೆ ಬೇಕೇ?
ಭ್ರಮರಾ | ಭ್ರಮರಾಂಬಾ | ನಮ್ಮ ನಿಮ್ಮ ತವರಾ 
ಗೊತ್ತಿಲ್ಲೇನೋ ಜವರಾ.

ನವಿರಾ ನವಿರಾ, ಮಾಡುವಿ ಯಾಕೀ ಕವರಾ
'ಕವಿಯಲ್ಲದವರಾs ಕವರ್ದವರುಂ ಒಳರೇ'
ಎಂದಾ ನೃಪತುಂಗಾ
ಶ್ರೀ ವಿಜಯನ ಲಿಂಗಾ ಸಂಗಾ
ಶ್ರುತಿ ಇಪ್ಪತ್ತೆರಡೂ | ಕೃತಿ ಸಾವಿರದಾ ಹರಡು
ಕಳೆ ಬರಡು , ಮೊರಡಿಗೆ ಮೊರಡಿಗೆ ನವಿಲು
ವಿದ್ಯುದ್ರೇಖಾs | ಮೇಘಾಡಂಬರ ನೌಕಾ
ಎಲ್ಲಾ ಗಂಧರ್ವರನಗರಾ | ನಗಲಾ ನಗಲಾ
ನಗನಗ ನವಿಲಾ| ಹಾಡೇ ಹಗಲಾ
ಶ್ರಾವಣದಲಿ ಅಭಿಜಿದ್ಯೋಗ 
ಕಾವ್ಯೋದ್ಯೋಗ.
 *************************************

-ಅಂಬಿಕಾತನಯದತ್ತ
(ನಾಕುತಂತಿ
ಡಾ||ದ.ರಾ ಬೇಂದ್ರೆಯವರ ನಾಕುತಂತಿ ಕವನ ಸಂಕಲನದ ಮತ್ತೆ ಶ್ರಾವಣ ಕವಿತೆ ಇಲ್ಲಿದೆ. ಇದರಲ್ಲಿರುವ ಅಪಾರವಾದ ಅರ್ಥ ವಿಚಾರಗಳ ಕುರಿತು ನನ್ನ ಬುದ್ಧಿಗೆ ನಿಲುಕಿದಷ್ಟನ್ನು ಮುಂದೊಮ್ಮೆ ಹಾಕುತ್ತೇನೆ. ನೀವೊಮ್ಮೆ ಓದಿ ಮಂಥನ ಮಾಡಿ..

ಮಂಗಳವಾರ, ಸೆಪ್ಟೆಂಬರ್ 20, 2011

ಕನ್ನಡಕ್ಕೆ ಒಟ್ಟೂ ಎಂಟು ಜ್ಞಾನಪೀಠ ಪ್ರಶಸ್ತಿಗಳು...

        ನಿನ್ನೆ ತಾನೇ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿಸಿದ್ದನ್ನು ಎಲ್ಲರೂ ಕೇಳಿರಬಹುದು.. ಇದು ಕನ್ನಡ ಭಾಷೆಗೆ ತೋರಿದ ಅತ್ಯುತ್ತಮ ಗೌರವವಾಗಿದೆ.
      ಪ್ರತಿ ವರ್ಷ ಕೂಡ ಭಾರತದ ಸಂವಿಧಾನದಲ್ಲಿ ಹೇಳಿದ ಹದಿನೆಂಟು ಭಾಷೆಗಳ ಸಾಹಿತ್ಯಕ್ಷೇತ್ರದಲ್ಲಿ ಮಾಡಿದ ಅತ್ಯುನ್ನತ ಸಾಧನೆಗೆ ಈ ಪ್ರಶಸ್ತಿ ಕೊಡಲಾಗುತ್ತದೆ. ಪ್ರತಿವರ್ಷ  ಸಲಹಾ ಸಮಿತಿ ಬೇರೆ ಬೇರೆ ಭಾಷೆಯ ಒಬ್ಬ ಕವಿ/ಸಾಹಿತಿ/ಲೇಖಕರ ಒಂದೊಂದು ಕೃತಿಯನ್ನು ಆ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಸೂಚಿಸುತ್ತದೆ. ಅದರಲ್ಲಿ ಅತ್ಯುನ್ನತವಾದ ಕೃತಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಒಂದೊಮ್ಮೆ 'ಆ ಕೃತಿಗಳಲ್ಲಿ  ಯಾವುದು ಶ್ರೇಷ್ಠ' ಎಂದು ನಿರ್ಣಯಿಸುವಲ್ಲಿ ಒಂದು ನಿರ್ಧಾರಕ್ಕೆ ಬರಲಾಗದಾದಾಗ ಆ ಲೇಖಕರ ಸಮಗ್ರ ಸಾಹಿತ್ಯವನ್ನು ಅವಲೋಕಿಸುತ್ತಾರೆ ಹಾಗೂ ಅದರಲ್ಲಿ ಯಾರ ಕೃತಿಗಳು ಪ್ರೌಢವಾಗಿವೆ ಎಂದು ಅವಲೋಕಿಸಿ ಪ್ರಶಸ್ತಿ ಕೊಡುತ್ತಾರೆ. ಈ ಪ್ರಶಸ್ತಿ ಐದು ಲಕ್ಷ ರೂಪಾಯಿ ನಗದು ಹಾಗೂ ಪ್ರಮಾಣಪತ್ರ ಜೊತೆಗೆ ಕಂಚಿನ ಒಂದು ವಾಗ್ದೇವಿಯ ಪ್ರತಿಮೆಯನ್ನು ಒಳಗೊಂಡಿರುತ್ತದೆ.. ಈ ಪ್ರಶಸ್ತಿಯ ಸಂಸ್ಥಾಪಕರು ಶ್ರೀ ಸಾಹು ಶಾಂತಿ ಪ್ರಸಾದ ಜೈನ ಹಾಗೂ ಅವರ ಪತ್ನಿ ಶ್ರೀಮತಿ ರಮಾ ಜೈನ್. ಇದನ್ನು 1961ರಲ್ಲಿ ಸ್ಥಾಪಿಸಿದರು.
ಇದುವರೆಗೆ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕನ್ನಡದ ಕವಿಗಳೇ ಹೆಚ್ಚಾಗಿದ್ದರು. ಇದು ನಮಗೆಲ್ಲ ಹೆಮ್ಮೆಯ ವಿಷಯ. ಎರಡನೇ ಸ್ಥಾನವನ್ನು ಹಿಂದಿ ಭಾಷೆ ಪಡೆದುಕೊಂಡಿತ್ತು. ಬಹುಶಃ 2005ರಲ್ಲಿ ಎರಡೂ ಭಾಷೆಗಳು ಏಳೇಳು ಪ್ರಶಸ್ತಿ ಪಡೆದು ಸಮಾನವಾಗಿದ್ದವು.  ಆ ನಂತರ ಹಿಂದಿಗೆ ಮತ್ತೆರಡು ಪ್ರಶಸ್ತಿಗಳು ಬಂದು ಈಗ 9 ಪ್ರಶಸ್ತಿ ಪಡೆದು ಅದು ಮೊದಲ ಸ್ಥಾನದಲ್ಲಿದೆ. ಕನ್ನಡ ಭಾಷೆಯ ಕೀರ್ತಿಪತಾಕೆಯನ್ನು ನಭದೆತ್ತರಕ್ಕೆ ಹಾರಿಸಿದ ಇವರೆಲ್ಲರಿಗೂ ನಮ್ಮ ವಂದನೆಗಳು ಹಾಗೂ ಅಭಿನಂದನೆಗಳು......
ಇದುವರೆಗೆ ಕನ್ನಡಕ್ಕೆ ಬಂದ ಜ್ಞಾನಪೀಠ ಪ್ರಶಸ್ತಿಗಳ ವಿವರ ಇಲ್ಲಿದೆ.


1. ಡಾ|| ಕೆ.ವಿ. ಪುಟ್ಟಪ್ಪ (ಕುವೆಂಪು) - ಕೃತಿ- ಶ್ರೀ ರಾಮಾಯಣ ದರ್ಶನಂ- 1967 ರಲ್ಲಿ


2 ಡಾ|| ದ. ರಾ ಬೇಂದ್ರೆ (ಅಂಬಿಕಾತನಯ ದತ್ತ)- ಕೃತಿ- ನಾಕುತಂತಿ-1973ರಲ್ಲಿ


3.ಡಾ|| ಶಿವರಾಮ ಕಾರಂತ- ಕೃತಿ- ಮೂಕಜ್ಜಿಯ ಕನಸುಗಳು (ಕಾದಂಬರಿ)-1977 ರಲ್ಲಿ



4.ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರ (ಶ್ರೀನಿವಾಸ)- ಕೃತಿ- ಚಿಕವೀರ ರಾಜೇಂದ್ರ (ಕಾದಂಬರಿ)- 1983 ರಲ್ಲಿ


5.ಡಾ||ವಿ.ಕೃ. ಗೋಕಾಕ (ವಿನಾಯಕ ಕೃಷ್ಣ ಗೋಕಾಕ)- ಕೃತಿ- ಭಾರತಸಿಂಧು ರಶ್ಮಿ (ಮಹಾಕಾವ್ಯ) -1983ರಲ್ಲಿ


6. ಡಾ||ಯು. ಆರ್ ಅನಂತಮೂರ್ತಿ- ಸಮಗ್ರಸಾಹಿತ್ಯಕ್ಕೆ-1994 ರಲ್ಲಿ



7. ಡಾ|| ಗಿರೀಶ ಕಾರ್ನಾಡ - ಸಮಗ್ರಸಾಹಿತ್ಯಕ್ಕೆ -1998 ರಲ್ಲಿ
8 ಡಾ|| ಚಂದ್ರಶೇಖರ ಕಂಬಾರ - ಸಮಗ್ರಸಾಹಿತ್ಯಕ್ಕೆ -2010 ರಲ್ಲಿ




ಗುರುವಾರ, ಸೆಪ್ಟೆಂಬರ್ 15, 2011

ಶ್ರಾವಣ ಬಂದ ಕಥೆ

        "ಇಂಜನಿಯರಿಂಗ್ ಕಲಿಯುತ್ತರುವ ನಮಗೇಕೆ ಕನ್ನಡವನ್ನು ಒಂದು ವಿಷಯವನ್ನಾಗಿ ಓದಲು ಇಟ್ಟಿದ್ದಾರಪ್ಪಾ?" ಎಂದು ಹಲವಾರು ಮಿತ್ರರು 3ನೇ ಸೆಮಿಸ್ಟರ್ ನಲ್ಲಿ ಬೇಸರಪಟ್ಟಿದ್ದರು.. ಅವರಿಗೆ ಕನ್ನಡವನ್ನು 25 ಅಂಕಕ್ಕೆ ಪರೀಕ್ಷೆಯಾಗಿ ಕೊಟ್ಟು ಬರೆಯಲು ಹೇಳುತ್ತಾರೆ ಎಂಬುದೇ ಯೋಚನೆಯಾಗಿತ್ತು,, ನನಗೆ ಇದೊಂದು ಆಸಕ್ತಿ ಹುಟ್ಟಿಸುವ ವಿಷಯ!! ಹೀಗಾಗಿ ಉಳಿದೆಲ್ಲಾ ಕ್ಲಾಸ್ ಗಳಿಗೆ ಬಂಕ್ ಹಾಕುತ್ತಿದ್ದೆನಾದರೂ ಕನ್ನಡ ತರಗತಿಯನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಅದು ಶನಿವಾರ ಮಧ್ಯಾಹ್ನವಿದ್ದರೂ ಕೂಡ!!!
       ಅದರಲ್ಲಿ ಮೊದಲಿಗೆ ಇದ್ದದ್ದು ಬೇಂದ್ರೆಯವರ "ಶ್ರಾವಣ ಬಂತು"ಪದ್ಯ.. ಅದನ್ನ ನಮ್ಮ ಅಧ್ಯಾಪಕರು ವಿವರಿಸಿದ್ದು ನನಗೆ ಬಹಳ ಇಷ್ಟವಾಯಿತು. ಅದರ ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ "ನಾಕುತಂತಿ" ಕವನ ಸಂಕಲನದಲ್ಲಿರುವ "ಮತ್ತೆ ಶ್ರಾವಣ" "ಮತ್ತೆ ಶ್ರಾವಣ ಬಂದಾ" ಇವನ್ನೆಲ್ಲ ಓದಿದಾಗ ಬೇಂದ್ರೆಯವರು ಶ್ರಾವಣವನ್ನು ನೋಡಿದ ರೀತಿ ನನಗೆ ಬಹಳ ಹಿಡಿಸಿತು..

    ಶ್ರಾವಣ ಕಾಡಿಗೆ ನಾಡಿಗೆ ಬೀಡಿಗೆ ಎಲ್ಲಾ ಕಡೆ ಬರುವಾಗ ಆಗುವ ಬದಲಾವಣೆಗಳನ್ನು ಹೇಳುತ್ತಾ ಕಡಲಿಗೆ ಬಂದದ್ದನ್ನು ವರ್ಣಿಸಿ ಹೇಳುತ್ತಾರೆ "ಕಡಲಿಗೆ ಬಂದ ಶ್ರಾವಣ | ಕುಣಿದ್ಹಾಂಗ ರಾವಣ ||" ಅಂದರೆ "ಶ್ರಾವಣ ಕಡಲಿಗೆ ಬಂದಾಗ ಬರುತ್ತಿದ್ದ ಅಲೆಗಳು ರಾವಣ ಕುಣಿದಾಗ ಅವನ ತಲೆಗಳು ಮೇಲೆ ಕೆಳಗೆ ಆದಂತೆ ಕಂಡವು"ಎಂದು ನಮ್ಮ ಅಧ್ಯಾಪಕರು ವಿವರಿಸಿದರು. ಗಾಳಿ ಭೈರವನ ರೂಪ ತಾಳಿ ಕುಣಿಯಿತಂತೆ! ಶ್ರಾವಣ ಸಾಗರ(ಕಡಲು)ದಿಂದ ಮೇಲೇರಿ ಘಟ್ಟಕ್ಕೆ ಬಂದು ರಾಜ್ಯ ಪಟ್ಟಕ್ಕೆ ಬಂತು.  ಶ್ರಾವಣ ಎಂದರೆ ಕೇವಲ ಅದೊಂದು ಮಾಸವಲ್ಲ.. ನನ್ನ ಅನಿಸಿಕೆಯಂತೆ (ಕವಿಯ ಭಾವ ಏನೆಂದು ಗೊತ್ತಿಲ್ಲ) 'ಒಂದು ಶುಭಗಳಿಗೆ ಬಂತು' ಎಂಬರ್ಥದಲ್ಲಿ ಹೇಳಿದ್ದಾರೆ... ಯಾಕೆಂದರೆ ಶ್ರಾವಣ ಮಾಸದ ಬಗ್ಗೆ ಹೇಳುತ್ತಾ ಕೊನೆಯ ಸಾಲುಗಳಲ್ಲಿ ಹೇಳುತ್ತಾರೆ "ಶ್ರಾವಣ ಮಾಸ ಶ್ರೀಕೃಷ್ಣ ಜನಿಸಿದ ಮಾಸ" ಎಂದು.. ಆದ ಕಾರಣ ಅದರಲ್ಲಿರುವ ವಿಶೇಷತೆ ಉಳಿದೆಲ್ಲಾ ಮಾಸಗಳಲ್ಲಿ ಇಲ್ಲ.. ಬಹುತೇಕ ಶ್ರಾವಣದಲ್ಲಿ ಬರುವಷ್ಟು ಹಬ್ಬಹರಿದಿನಗಳು ಬೇರೆ ಮಾಸಗಳಲ್ಲಿ ಇಲ್ಲ. ಈ ಶ್ರಾವಣ ಮಾಸದಲ್ಲಿ ಪೂರ್ಣ ಪ್ರಮಾಣದ ಮಳೆ ಬರುತ್ತಿರುತ್ತದೆ. ಆಗ ಗುಡ್ಡ ಗುಡ್ಡಗಳೆಲ್ಲ ಸ್ಥಾವರ ಲಿಂಗದಂತೆ ಕವಿಗೆ ಕಾಣುತ್ತವೆ.. ಈ ಮಳೆ ಆ ಲಿಂಗಗಳಿಗೆ ಅಭ್ಯಂಗ ಎರೆಯುವಂತೆ ಕಾಣುವುದು ಎಂತಹ ಅದ್ಭುತ ಕಲ್ಪನೆ ಅಲ್ಲವೇ!! ಬೆಟ್ಟಗಳೆಲ್ಲ ಕುತನಿಯ ಅಂಗಿ ತೊಟ್ಟು ಜಾತ್ರೆಗೆ ಹೊರಟ ಹಾಗೆ ಕಾಣುತ್ತದೆ. ಬನ ಬನಗಳೆಲ್ಲ ಮದುವೆ ಮಗನ ಹಾಗೆ ತಯಾರಾಗಿ ತಲೆಗೆ ಬಾಸಿಂಗ ಕಟ್ಟಿಕೊಂಡು ಹರ್ಷಗೊಂಡು ನಿಂತಿರುವಂತೆ ಕಾಣುತ್ತದೆ! ಜಗದ ಗುರು ಜನಿಸಿದ ಮಾಸ ಅದು ಎಲ್ಲ ರೀತಿಯಲ್ಲೂ ಶುಭಕಾರಕವಾಗಿರಲಿ ಎಂಬ ಆಶಯ ಕವಿಯದ್ದು..
  ನನ್ನ ಮಿತ್ರ ಶ್ರವಣ ಒಂದು ಮಾತು ಹೇಳುತ್ತಿದ್ದ.. "ನಿನ್ನ ಬರವಣಿಗೆ ವೇದಗಳಾಗದೇ ವಚನಗಳಾಗಲಿ" ಎಂದು ಅಂದರೆ ವಚನಗಳಾದರೆ ಎಲ್ಲರಿಗೂ ಅರ್ಥವಾಗುವಂತೆ ಸರಳ ಸುಲಭವಾಗಿರುತ್ತವೆ ವೇದಗಳನ್ನು ಅರ್ಥಮಾಡಿಕೊಳ್ಳಲು ಬಹಳ ಕಷ್ಟ ಪಡಬೇಕು ಎಂದು. ಹಾಗೇ ನಮ್ಮ ಕನ್ನಡ ಅಧ್ಯಾಪಕರೂ ಒಂದು ಮಾತು ಹೇಳುತ್ತಿದ್ದರು "ಬೇಂದ್ರೆಯವರು ಜನರ ನಡುವೆ ನಿಂತು ಜಗತ್ತನ್ನು ನೋಡಿದರು, ಕುವೆಂಪು ಅವರು ಬರವಣಿಗೆಯಲ್ಲಿ ಹೊಸ ಜಗತ್ತನ್ನೇ ತೋರಿಸಿದರು" ಎಂದು... ಬಹುಶಃ ಅವರು ಬಯಲು ಸೀಮೆಯವರಾದ ಕಾರಣ ಬೇಂದ್ರೆಯವರ ಕವನಗಳು ಅವರಿಗೆ ಬೇಗ ಆತ್ಮೀಯವಾದವೇನೋ?... ಕುವೆಂಪು ಅವರು ಇರುವ ಜಗತ್ತನ್ನೇ ಹೊಸರೀತಿಯಲ್ಲಿ ತೋರಿಸಿದರೇ ಹೊರತು ಯಾವ ಹೊಸ ಜಗತ್ತನ್ನೂ ತೋರಿಸಲಿಲ್ಲ ಎಂದು ನನ್ನ ಅನಿಸಿಕೆ. ಆದರೂ ಇಬ್ಬರು ಕವಿಗಳ ಪ್ರತಿಭೆಯನ್ನು ತುಲನೆ ಮಾಡಬಾರದು ಎಂಬುದೊಂದು ಅಭಿಪ್ರಾಯ.. ಯಾಕೆಂದರೆ ಅವರವರ ದೃಷ್ಡಿಕೋನದಲ್ಲಿ ಅವರವರ ಕೃತಿಗಳು ಚಿತ್ರಿಸಲ್ಪಟ್ಟಿರುತ್ತವೆ.. ಅದಕ್ಕೇ ಕಾಳಿದಾಸ " ಲೋಕೋ ಭಿನ್ನರುಚಿಃ" ಎಂದು ಹೇಳಿದ್ದಾನೆ.. ಅದೆಲ್ಲಾ ಹಾಗಿರಲಿ.. ಬೆಂದ್ರೆಯವರ ಕವಿತೆಗಳು ಬಹು ಬೇಗ ಜನರ ಮನಸ್ಸಿಗೆ ತಲುಪುತ್ತಿದ್ದುದಂತೂ ನಿಜ.. ಯಾಕೆಂದರೆ ಅವರದು ಆಡುಭಾಷೆ (ವಚನಗಳ ಹಾಗೆ) ಕುವೆಂಪು ಅವರದು ಪ್ರೌಢ ಗ್ರಾಂಥಿಕ ಭಾಷೆ (ವೇದಗಳಂತೆ)...
ಈ ಶ್ರಾವಣ ಬಂತು ಕವಿತೆಯಲ್ಲಿನ ಬೇಂದ್ರೆಯವರ ವರ್ಣನೆಗಳು ಬಹು ಬೇಗ ಮನಸ್ಸಿನಲ್ಲಿ ಚಿತ್ರಣಗೊಳ್ಳುತ್ತವೆ. ಅವರ ಕಲ್ಪನೆಗಳು ನಮ್ಮನ್ನು ಬೇಗ ಆವರಿಸಿಕೊಳ್ಳುತ್ತವೆ. ಯಾರು ಅವರ ಕವಿತೆಗಳನ್ನು ಓದಿಲ್ಲವೋ ಅವರು ಒಮ್ಮೆ ಓದಿ ನೋಡಿ.. ನಿಮ್ಮ ಮನಸ್ಸಿನಲ್ಲಿ  ಅನೇಕಾನೇಕ ಕಲ್ಪನೆಗಳು ಹಾದು ಹೋಗುತ್ತವೆ. ಹೃದಯಸ್ಪರ್ಷಿ ಭಾವಗಳ ಶರಧಿಯೇ ತೆರೆದುಕೊಳ್ಳುತ್ತದೆ.. "ಮತ್ತೆ ಶ್ರಾವಣ" ಮತ್ತೆ "ಶ್ರಾವಣ ಬಂದ" ಕವಿತೆಗಳ ಬಗ್ಗೆ ನನ್ನ ಅನಿಸಿಕೆಗಳೊಂದಿಗೆ ಶೀಘ್ರದಲ್ಲಿ ನಿಮ್ಮ ಮುಂದೆ ಬರುತ್ತೇನೆ, ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ.
ನಿಮ್ಮ
ಗಣೇಶ ಕೊಪ್ಪಲತೋಟ