Powered By Blogger

ಮಂಗಳವಾರ, ಜೂನ್ 30, 2015

ಸಹೃದಯಕಾಲ-೨೦ ಸೂರ್ಯೋದಯ

ಮಹಾಕಾವ್ಯದ ಬಗ್ಗೆ ಅದರಲ್ಲಿ ಬರುವ ಅಷ್ಟಾದಶ ವರ್ಣನೆಗಳು ಬಗ್ಗೆ ಎಲ್ಲ ಈ ಹಿಂದೆ ಬರೆದ ಲೇಖನಗಳಲ್ಲಿ ವಿವರಿಸಿದ್ದೆ. ಹಾಗೆ ಪೂರ್ವಕವಿಗಳ ಕಾವ್ಯವನ್ನು ಅವಲೋಕಿಸಿದಾಗ ಸಿಗುವ ಅನೇಕ ಪದ್ಯಗಳಲ್ಲಿ ಪ್ರಕೃತಿಯ ವರ್ಣನೆ ಅಸಂಖ್ಯವಾಗಿ ಸಿಗುತ್ತವೆ. ಅವುಗಳನ್ನೇ ಒಂದು ಸಂಗ್ರಹವಾಗಿ ಬರೆದ ಕೃತಿಗಳೂ ಅನೇಕ. ಕಾವ್ಯಾವಲೋಕನದಲ್ಲಿ ಅಲಂಕಾರಗಳನ್ನು ವಿವರಿಸುವಾಗ ಲಕ್ಷ್ಯಕ್ಕೆ ಬೇರೆ ಬೇರೆ ಕವಿಗಳ ಪದ್ಯಗಳನ್ನು ಉದ್ಧರಿಸಿದರೆ ಸೂಕ್ತಿಸುಧಾರ್ಣವದಂತಹ ಕೃತಿಗಳಲ್ಲಿ ಅಷ್ಟಾದಶವರ್ಣನೆಗಳನ್ನೇ ಆಶ್ವಾಸಗಳಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ.
ಹೀಗೆ ಮಲ್ಲಿಕಾರ್ಜುನ ಕವಿಯ "ಸೂಕ್ತಿಸುಧಾರ್ಣವ"ವನ್ನು ಅವಲೋಕಿಸುತ್ತಿರುವಾಗ ಸಿಕ್ಕ ಪದ್ಯ- ಲೀಲಾವತಿಯಿಂದ ಉದ್ಧೃತವೆಂದು ಅಲ್ಲಿಯೇ ಕೊಟ್ಟಿದ್ದ. ಸೂರ್ಯೋದಯವನ್ನು ವರ್ಣಿಸುವ ಪದ್ಯ ಹೀಗಿದೆ.

ವಾರುಣಿ ಕಳ್ಳನೀಂಟಿ ಮಱೆದಿಕ್ಕಿದ ಬಟ್ಟಲೊ ಭೀತಿಯಿಂ ನಿಶಾ-
ಸ್ವೈರಿಣಿ ಪೋಗೆ ಬಿರ್ದ ಕಿವಿಯೋಲೆಯ ಮೌಕ್ತಿಯ ಪತ್ರಮೋ ನಭೋ -
ವಾರಣಮೊಲ್ಲದೊಕ್ಕ ದಧಿಪಾಂಡುರಪಿಂಡಮೊ ಪೇೞೆನಲ್ಕೆ ನೀ-
ಹಾರಮಯೂಖಮಂಡಲಮದೇನೆಸೆದಿರ್ದುದೊ ಪಶ್ಚಿಮಾದ್ರಿಯೊಳ್||
(ಲೀಲಾವತಿ ೩-೩)

ವಾರುಣಿ (ಪಶ್ಚಿಮ ದಿಕ್ಕು/ ಮದ್ಯದ ಒಂದು ವಿಧ) ಕಳ್ಳನ್ನು ಕುಡಿದು ಮರೆತು ಇಟ್ಟ ಬಟ್ಟಲೋ, ಭೀತಿಯಿಂದ ರಾತ್ರಿ ಎನ್ನುವ ಸ್ವೈರಿಣಿ ಹೋಗುವಾಗ ಅವಳ ಕಿವಿಯಿಂದ ಬಿದ್ದ ಓಲೆಯ ಚಿಪ್ಪೋ,  ಅಥವಾ ಆಕಾಶ ಎನ್ನುವ ಆನೆ ತಿನ್ನಲು ಒಲ್ಲದೆ ದೂರವಿಟ್ಟ ಮೊಸರನ್ನದ ಉಂಡೆಯೋ ಎಂಬ ರೀತಿಯಲ್ಲಿ ಹಿಮದ ಕಿರಣಮಂಡಲ(ಚಂದ್ರ) ಪಶ್ಚಿಮದ ಬೆಟ್ಟದಲ್ಲಿ ಕಾಣುತ್ತಿತ್ತು
ಇಲ್ಲಿ ಕೊಡುವ ನಾಲ್ಕು ಚಿತ್ರಣಗಳನ್ನು ನೋಡಿದರೆ ಕವಿಯ ಕಲ್ಪನೆ ಎಷ್ಟು ಸುಂದರ ಎನಿಸುತ್ತದೆ. ಕುವೆಂಪು ಅವರು "ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ" ಎಂದು ಹೇಳಿದ್ದು ಎಷ್ಟು ಸತ್ಯ ಎನಿಸುತ್ತದೆ. ಸಾಮಾನ್ಯರಿಗೆ ಪ್ರಕೃತಿಯ ಶಕ್ತಿಯ ಮೂಲವಾಗಿ ಅಲ್ಲದೆ ಹಲವು ರೀತಿಯಿಂದ ವರವೆನಿಸಿದರೆ, ಕವಿಗಳ ಪಾಲಿಗೆ ಹೊಸ ಕಲ್ಪನೆಯನ್ನು ಹುಟ್ಟಿಸುವುದರಿಂದ, ಸಹೃದಯರ ಪಾಲಿಗೆ ಕವಿಕಲ್ಪನೆಯನ್ನು ಆಸ್ವಾದಿಸಲು ಉಪಯುಕ್ತವಾಗಿರುವುದರಿಂದ ವರವೆನಿಸಿದೆ ಎಂಬುದು ನಿಸ್ಸಂಶಯ.

ಮಂಗಳವಾರ, ಜೂನ್ 2, 2015

ಸಹೃದಯಕಾಲ-೧೯ ಅಗಸ್ತ್ಯ ಚರಿತೆ

ರಸ-ಧ್ವನಿ-ಔಚಿತ್ಯ ಇವುಗಳಿಗೆ ಪೂರಕವಾಗಿ ಕಾವ್ಯವೊಂದು ಬರೆಯಲ್ಪಟ್ಟರೆ ಸತ್ಕಾವ್ಯವೆನಿಸಿಕೊಳ್ಳುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಬರೆಯುವ ಓಘದಲ್ಲಿ ಹೇಗೆ ಹೇಗೋ ಸಾಗುವ ಕಾವ್ಯದಲ್ಲಿ ಇದು ಸಾಧ್ಯವಾಗುವುದು ಸಿದ್ಧರಿಗೆ ಮಾತ್ರ. ಯಾಕೆಂದರೆ ಅವರು ಸಾಧನೆ ಮಾಡಿರುತ್ತಾರೆ.
ಹೀಗೆ ಬರೆಯುವಾಗ ಅಲ್ಲಲ್ಲಿ ಪೂರ್ವಕವಿಗಳನ್ನು ಹಿಮ್ಮೆಟ್ಟಿಸಿ ಮುಂದೆ ಧಾವಿಸುವ ಬಯಕೆ ಹುಟ್ಟದೇ ಹೋಗುವುದಿಲ್ಲ. ಅದರಲ್ಲಿ ಸಫಲರಾಗದಿದ್ದರೂ ಪದ್ಯದಲ್ಲಿ ಪೂರ್ವಕವಿಯ ಛಾಯೆ ಗೊತ್ತಾಗುವುದು ಸಹಜ.
ಹಾಗೆ ಇತ್ತೀಚೆಗೆ ಬರೆದು ಮುಗಿಸಿದ "ಅಗಸ್ತ್ಯಚರಿತೆ"ಕಾವ್ಯದಲ್ಲಿ ಎಷ್ಟೋ ನೀರಸ-ಧ್ವನಿರಹಿತ-ಅನುಚಿತ ಪದ್ಯಗಳು ಸೇರಿಕೊಂಡಿವೆ. ಚಿತ್ರಚಮತ್ಕಾರಗಳನ್ನು ಶ್ಲೇಷವನ್ನು ಮಾಡುವಲ್ಲಿ ಕ್ಲೇಶವೊದಗಿ ಅಲಂಕಾರ "ಅಲಂ"ಕಾರ(ಸಾಕಪ್ಪಾ ಸಾಕು ಎನಿಸುವಂತೆ) ಕೂಡ ಆಗಿದೆ. ಕವಿಗಳಿಗೂ ಸಹೃದಯರಿಗೂ ಇವೆಲ್ಲ ವೇದ್ಯವಾದ ಕಾರಣ ಹೆಚ್ಚು ವಿಸ್ತರಿಸುವ ಆವಶ್ಯಕತೆ ಇಲ್ಲ.

ಇಲ್ಲಿ ರಸಮಯ ಎಂದೆನಿಸಿದ ಕೆಲವು ಪದ್ಯಗಳನ್ನು ಹಂಚಿಕೊಳ್ಳುವ ಬಯಕೆಯಿಂದ ಹಾಕುತ್ತಿದ್ದೇನೆ. ಬಾಣನಂತೆ ಪರಿಸಂಖ್ಯಾಲಂಕಾರದ ಮೋಹ ಕವಿದಿದೆ.
ಅಗಸ್ತ್ಯ ಸಮುದ್ರಪಾನವನ್ನು ಮಾಡಲು ಬರುವಾಗಿದ್ದ ಸಮುದ್ರವರ್ಣನೆಯ ಪದ್ಯ.

ಮತ್ತೇಭವಿಕ್ರೀಡಿತ||

ಘನದಂದಂ ಜಲಗರ್ಭನಂಬರನದೀಧಾಮಂ ಹರಂಬೋಲ್ತು ಜೀ-

ವನಲಾವಣ್ಯಕರಂ ವಿರಿಂಚಿಕೃತಲೇಖಂಬೊಲ್ ಸಮುದ್ರಂ ಸ್ವಯಂ
ಧನಮಂಜೂಷೆಯವೊಲ್ ಸದಾನವಪಥಂ ಕಾಡೆಂಬವೋಲೇ ಸುರೇಂ-
ದ್ರನವೊಲ್ ವಾರ್ಧಿಯದಾಯ್ತಧಃಕೃತಮಹಾದಿಙ್ನಾಗದಿಂದಾವಗಂ||
ತಾತ್ಪರ್ಯ- ಸಮುದ್ರವು ಮೋಡದಂತೆ ಜಲಗರ್ಭ(ನೀರನ್ನು ಗರ್ಭದಲ್ಲಿ ಉಳ್ಳದ್ದು) ,
ಶಿವನಂತೆ ಅಂಬರನದೀಧಾಮ (ಗಂಗಾನದಿ ಸೇರುವ ಸ್ಥಳ), ಬ್ರಹ್ಮ ಬರೆದ ಹಣೆಯ ಬರೆಹದಂತೆ ಜೀವನಲಾವಣ್ಯಕರ(ಬ್ರಹ್ಮಲೇಖ- ಜೀವನದಲ್ಲಿ ಲಾವಣ್ಯವನ್ನು ಉಂಟುಮಾಡುತ್ತದೆ. ಸಮುದ್ರ- ಜೀವನ ಅಂದರೆ ನೀರನ್ನು ಲಾವಣ್ಯ ಅಂದರೆ ಲವಣದ ಭಾವ-ಉಪ್ಪು ರುಚಿ ಆಗುವಂತೆ ಮಾಡುತ್ತದೆ)
ಸ್ವಯಂ ಧನಮಂಜೂಷೆ-ದುಡ್ಡಿನ ಪೆಟ್ಟಿಗೆಯಂತೆ ಸಮುದ್ರ (ಸಮುದ್ರ ಎಂದರೆ ಮುದ್ರೆ/ಬೀಗದಿಂದ ಕೂಡಿದ್ದು ಎಂಬ ಅರ್ಥವೂ ಇದೆ) ಕಾಡಿನಂತೆ ಸದಾನವಪಥ (ಸ+ದಾನವಪಥ-ರಾಕ್ಷಸರ ಹಾದಿಯಿಂದ ಕೂಡಿದ್ದು, ಸದಾ+ನವಪಥ- ಯಾವಾಗಲೂ ಹೊಸ ಹಾದಿಯನ್ನೇ ಉಳ್ಳದ್ದು) ಸುರೇಂದ್ರನಂತೆ ಅಧಃಕೃತಮಹಾದಿಙ್ನಾಗದಿಂದ (ಇಂದ್ರ-ಯಾವತ್ತೂ ಮಹಾದಿಗ್ಗಜ ಐರಾವತವನ್ನು ಏರುತ್ತಾನೆ, ಸಮುದ್ರಕೂಡ ಅಷ್ಟದಿಗ್ಗಜಗಳನ್ನೂ ಕೆಳಕ್ಕೆ ಹಾಕಿರುತ್ತದೆ)
ಇಲ್ಲಿ ಬಳಸಿದ ಶಬ್ದಗಳ ಸಮಸ್ತಪದದ ಬದಲು ಅದೇ ಅರ್ಥ ಕೊಡುವ ಬೇರೆ ಶಬ್ದಗಳನ್ನು ಹಾಕಿದರೆ ಹೊಂದಾಣಿಕೆ ಇರುವುದಿಲ್ಲ. ಸಮಸ್ತಪದದ ಶ್ಲೇಷ ಉಪಮಾನ ಉಪಮೇಯ ಇವೆರಡಕ್ಕೂ ಅನ್ವಯವಾಗುವಂತಿರುತ್ತದೆ ಎಂಬುದೇ ಸ್ವಾರಸ್ಯ. ಬಾಣಭಟ್ಟನನ್ನು ಓದಿದವರಿಗೆ- ಸಾವಿರ ರೂಪಾಯಿ ನೋಟನ್ನು ಹಿಡಿದುಕೊಂಡವನಿಗೆ -ನಾಕಾಣೆ ಬಿಲ್ಲೆಯನ್ನು ತೋರಿಸಿದಂತೆ ಆಗುತ್ತದೆ ಅಷ್ಟೆ :-)

ಬುಧವಾರ, ಮೇ 6, 2015

ಸಹೃದಯಕಾಲ -೧೮ ಛತ್ರ

ಸಮಾಸಭೂಯಿಷ್ಠವಾದ ಪದ್ಯರಚನೆ ಹಲವು ಕವಿಗಳಿಗೆ ತುಂಬ ಇಷ್ಟವಾದ ಪ್ರಕಾರವಷ್ಟೇ ಅಲ್ಲದೇ ಶೈಲಿಯಲ್ಲಿ ಒಂದು ಬಿಗುವನ್ನಿಡುವ ಕಾರಣ ಅದು ಸಹೃದಯಾನಂದಕರವಾಗಿರುತ್ತದೆ ಕೂಡ. ಆದರೆ ಸುಲಭವೇದ್ಯವಲ್ಲವೆಂಬ ಕಾರಣ ನಾರಿಕೇಳಪಾಕವೆಂದು ಜರಿಯಲೂ ಬಹುದು. ಭಾರತೀಯ ಭಾಷೆಗಳಿಗೆ ಸಮಾಸವೆನ್ನುವುದು ಒಂದು ವರದಾನವೇ ಆಗಿದೆ. ಏಕೆಂದರೆ ಹೀಗೆ ಸಮಸ್ತ ಪದಗಳಲ್ಲಿ ಅದೆಷ್ಟೋ ವಿಸ್ತಾರವಾದ ವಾಕ್ಯವನ್ನೂ ಕೂಡ ಸುಲಭವಾಗಿ ಹೇಳಬಹುದು. ಪ್ರಾಚೀನ ಕವಿಗಳಲ್ಲಿ ತುಂಬಾ ಬಳಕೆಯಾದ ಒಂದು ರೂಪಕವನ್ನೇ ಉದಾಹರಿಸುವುದಾದರೆ- " ಈ ರಾಜನು ಸಮಸ್ತವೈರಿಗಳನ್ನೂ ನಾಶಮಾಡುವವನು" ಎಂಬರ್ಥದಲ್ಲಿ "ರಾಜಂ ರಿಪುಕುಲವಜ್ರಂ" ಎನ್ನಬಹುದು. ಅಲ್ಲಿ ಒಂದು ರೂಪಕವೂ ಇದೆ. ವೈರಿಕುಲಕ್ಕೆ ಇಂದ್ರನ ವಜ್ರಾಯುಧವೇ ಈ ರಾಜ ಎಂದು. ಹಾಗೆ "ಕೌರವ್ಯಗಂಧೇಭಕೇಸರಿ" ಎಂದು ರನ್ನ ಭೀಮನ ಬಗ್ಗೆ ಹೇಳುತ್ತಾನೆ. ದುರ್ಯೋಧನಾದಿಗಳೆಂಬ ಮದ್ದಾನೆಗಳಿಗೆ ಸಿಂಹದಂತೆ ಇದ್ದಾನೆ ಎಂದು. ಇಲ್ಲೆಲ್ಲ ಸಮಸ್ತಪದಗಳನ್ನು ಬಳಸಿದಾಗ ಆದ ವೈಶಿಷ್ಟ್ಯ ಗಮನಾರ್ಹ. ಅಲ್ಲದೇ ಪದಶಿಲ್ಪ ಹಾಗೂ ಬಂಧದ ಬಿಗಿ ಕೂಡ ಸಡಿಲ ಪದಗಳಿಗಿಂತ ಚೆನ್ನಾಗಿರುತ್ತದೆ. 


ಇಂತಹ ಒಂದು ಪದ್ಯ-ಹಿಂದೊಮ್ಮೆ ಶತಾವಧಾನಿ ಡಾ||ಆರ್ ಗಣೇಶ್ ಅವರಿಗೆ ಭಾರತೀಯ ವಿಜ್ಞಾನಮಂದಿರದಲ್ಲಿ ನಡೆದ ಅವಧಾನವೊಂದರಲ್ಲಿ ಕೊಡೆಯ ಬಗ್ಗೆ ಪದ್ಯ ರಚಿಸಲು ಕೇಳಿದಾಗ ಅವರು ಉತ್ತರಿಸಿದ್ದು.

ಸೀಸಪದ್ಯ||
ಮಾರ್ತಂಡಚಂಡಕರಪರಿಮಾರ್ಜನೈಕಘನನೀಲಜೀಮೂತಸಂಕಾಶಕಾಯ
ದುರ್ದಮ್ಯಝಂಝಾನಿಲಪ್ರೋದ್ಧತಪ್ರಾವೃಡಾಘಾತಶಮನಗೋವರ್ಧನಧನ
ಋಣದಾತೃನಿರ್ಘೃಣಾರುಣವೀಕ್ಷಣಾಸಿಹತಿದುರ್ಭೇದ್ಯರಕ್ಷಣಾಫಲಕೋಪಮ
ಮಾರ್ಗಸ್ಥನಿರ್ಣಾಥಸಾರಮೇಯಸಮೂಹಸೇನಾನಿವಾರಣಮಹೇಂದ್ರಾಯುಧ!

ಅಂಬುಜೋಪಮಗಾತ್ರ ಸರ್ವಜನತಾಪ್ತಿಪಾತ್ರ
ಅಬಲಾಕರಾತ್ತನವರಾಗಾನುರಾಗಚೈತ್ರ
ವೃದ್ಧಸಂಧ್ಯಾವಿಹಾರೋಚಿತಾಧಾರವೇತ್ರ
ಎಂತು ಪ್ರಶಂಸಿಪುದು ನಿನ್ನನಾಂ ಮಿತ್ರ ಛತ್ರ!

(ಮಾರ್ತಂಡ ಎಂದರೆ ಸೂರ್ಯನ ಪ್ರಚಂಡವಾದ ಕಿರಣಗಳನ್ನು ತೊಳೆದುಹಾಕುವಂತಹ ಕಪ್ಪಾದ ಮೋಡಗಳಂತೆ ಮೆಯ್ಯಿರುವವನೇ!

ತಡೆಯಲಾರದಂತಹ ಗಾಳಿಬೀಸುತ್ತಾ ಮಳೆ ಬರುವಾಗ ಅದರ ಆಘಾತವನ್ನು ತಡೆಯಲು ಗೋವರ್ಧನಗಿರಿಯಂತೆ ಇರುವವನೆ 

ಸಾಲಕೊಟ್ಟವರ ನಿರ್ಘೃಣವಾದ ದೃಷ್ಟಿಯೆಂಬ ಖಡ್ಗದ ಹೊಡೆತದಿಂದ ತಪ್ಪಿಸಿಕೊಳ್ಳಲು ದುರ್ಭೇದ್ಯವಾದ ರಕ್ಷಣಾಫಲಕದಂತಿರುವವನೇ

ದಾರಿಯಲ್ಲಿರುವ ಯಾವುದೇ ಒಡೆಯನಿಲ್ಲದ ನಾಯಿಗಳ ಸಮೂಹವೆಂಬ ಸೇನೆಯನ್ನು ನಿವಾರಿಸಲು ಇಂದ್ರನ ವಜ್ರಾಯುಧದಂತೆ ಇರುವವನೇ

ಕಮಲದಂತಹ ಮೈಯವನೇ, ಎಲ್ಲ ಜನರಿಗೂ ಆಪ್ತನಾದವನೇ,

ಅಬಲೆಯರ ಕೈಸೇರಿ ಹೊಸ ರಾಗ ಅನುರಾಗದಿಂದ ಚೈತ್ರದಂತಿರುವವನೇ

ವೃದ್ಧರ ಸಂಜೆಯ ವಿಹಾರಕ್ಕೆ ಆಧಾರವಾದ ಬೆತ್ತದಂತಿರುವವನೇ

ನಿನ್ನನ್ನು ಹೇಗೆ ಪ್ರಶಂಸಿಸಲಿ  ಓ ಮಿತ್ರನೇ! ಛತ್ರನೇ!)


ಗಂಭೀರವಾಗಿ ಬಿಸಿಲಿಗೆ ಅಡ್ಡವಾಗುತ್ತದೆ, ನೆರಳುಕೊಡುತ್ತದೆ, ಮಳೆಯಿಂದ ಸಂರಕ್ಷಣೆ ನೀಡುತ್ತದೆ ಇತ್ಯಾದಿ ವಿವರಗಳು ಅಲಂಕಾರಭರಿತವಾಗಿ ಉಚಿತವಾಗಿ ಬಂದಿದೆ.  ಅಲ್ಲದೇ ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಬಳಸುವ ಬಗೆ, ಬೀದಿ ನಾಯಿಗಳನ್ನು ಓಡಿಸಲು ಬಳಸುವುದು ಇಲ್ಲೆಲ್ಲ ಹಾಸ್ಯರಸಲೇಪನವಿದೆ. 


ಇಲ್ಲಿ ಸಮಸ್ತಪದಗಳಲ್ಲಿ ಅವಧಾನಿಗಳು ಕೊಟ್ಟ ಚಿತ್ರಣ ರೂಪಕ ಉಪಮಾ ಮೊದಲಾದ ಅಲಂಕಾರಗಳ ಮೂಲಕ ಅನಿರ್ವಚನೀಯವಾಗಿ ಮೂಡಿ ಬಂದಿದೆ. ಜೊತೆಗೆ ಅನುಪ್ರಾಸಾದಿ ಪ್ರಾಸಾದಿಕ ಗುಣಗಳು ಯಥೋಚಿತವಾಗಿ ಎಲ್ಲ ಸಾಲುಗಳಲ್ಲಿಯೂ ಇದೆ. ಕೊನೆಗೆ "ಮಿತ್ರ ಛತ್ರ" ಎಂಬ ಛೇಕಾನುಪ್ರಾಸ ಕೂಡ ಇದೆ. ಅದನ್ನೂ ಸಮಾಸವನ್ನಾಗಿ ಮಾಡಿದರೆ ಸ್ವಂತದ್ದಲ್ಲದೆ ಬೇರೆಯ ಮಿತ್ರರ ಬಳಿ ಎರವಲು ಪಡೆದುಕೊಂಡ ಕೊಡೆ' ಎಂದು ಅರ್ಥೈಸಿ ಇನ್ನಷ್ಟು ಹಾಸ್ಯಕ್ಕೆ ಅವಕಾಶ ಮಾಡಿಕೊಳ್ಳಬಹುದು.  

ಒಟ್ಟಾರೆ ರಸಿಕರ ಆಸ್ವಾದನೆಗೆ "ಇಲ್ಲುಂಟು ಅನಂತ ಅವಕಾಶ"...

ಶುಕ್ರವಾರ, ಏಪ್ರಿಲ್ 17, 2015

ಸಹೃದಯಕಾಲ-೧೭ ಮತ್ತೆ ವಸಂತ

ಕುಮಾರವ್ಯಾಸನ ಕರ್ಣಾಟಭಾರತಕಥಾಮಂಜರಿಯಲ್ಲಿ ಬರುವ ವಸಂತರ್ತುವಿನ ವರ್ಣನೆಯನ್ನು ಹಿಂದೆ
ಸಹೃದಯಕಾಲ-೪ರಲ್ಲಿ ನೋಡಿದ್ದೇವೆ. ಇಲ್ಲಿ ಕೂಡ ಮತ್ತೆ ವಸಂತದ ವರ್ಣನೆಯನ್ನೇ ಆಯ್ಕೆ ಮಾಡುವುದರಲ್ಲಿ ಎರಡು ಉದ್ದೇಶಗಳಿವೆ. ಒಂದು ಪ್ರಸ್ತುತ ಪ್ರಕೃತಿಯಲ್ಲಿ ಅದಾಗಲೇ ವಸಂತಪ್ರವೇಶವಾಗಿರುವುದು, ಎರಡನೇಯದೆಂದರೆ ಪಂಪ ಹಾಗೂ ಕುಮಾರವ್ಯಾಸರಿಬ್ಬರೂ ಒಂದು ಸಂದರ್ಭವನ್ನು ಹೇಗೆ ವರ್ಣಿಸಿದ್ದಾರೆ ಎಂಬುದರ ಪರಿಚಯವಾಗುತ್ತದೆ ಎಂಬುದು. ಸಹೃದಯರಲ್ಲಿ  ತೌಲನಿಕವಾಗಿ ನೋಡಬಯಸುವವರಿಗೂ ಕೊರತೆಯಿಲ್ಲವಷ್ಟೆ!

ಸಂದರ್ಭ: ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದ ದ್ವಿತೀಯಾಶ್ವಾಸದ ೧೨ನೆಯ ಪದ್ಯ ಮತ್ತು ನಂತರದ ಆಯ್ದ ಭಾಗಗಳು- ಪಾಂಡುವಿಗೆ ಕುಂತಿಮಾದ್ರಿಯರ ಮೂಲಕ ದೂರ್ವಾಸ ಮಹರ್ಷಿಯ ಮಂತ್ರಫಲವಾಗಿ ಸಂತಾನಭಾಗ್ಯವಾಗಿರುತ್ತದೆ. ಆ ಸಂದರ್ಭದಲ್ಲಿ ಶತಶೃಂಗ ಪರ್ವತಗಳಲ್ಲಿ ವಸಂತರ್ತು ಬರುತ್ತದೆ.

ಚಂ|| ಅಲರ್ದದಿರ್ಮುತ್ತೆ ಪೂತ ಪೊಸ ಮಲ್ಲಿಗೆ ಕಂಪನವುಂಕುತಿರ್ಪ ತೆಂ
ಬೆಲರುಮಿದಂ ಗೆಲಲ್ಬಗೆವ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ|
ಗಿಲೆ ನನೆದೋಱ ನುಣ್ಪೆಸೆವ ಮಾಮರನೊರ್ಮೊದಲಲ್ಲದುಣ್ಮುವು
ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್|| ೧೨||
(ಹೂ-ತಳೆದ ಅದಿರ್ಮುತ್ತೆ-ಮಾಧವೀಲತೆ, ಹೊಸದಾದ ಮಲ್ಲಿಗೆ, ಕಂಪನ್ನು ಹರಡುತ್ತಿರುವ ತಂಗಾಳಿ, ಇದನ್ನು ಗೆಲ್ಲಲು ಯೋಚಿಸುತ್ತಿರುವ ದುಂಬಿಗಳು, ತಮ್ಮ ಇಂಪಾದ ಕಂಠದ ಧ್ವನಿಯಿಂದ ಕುಕಿಲಿಡುತ್ತಿರುವ ಕೋಗಿಲೆ ಮೊಗ್ಗನ್ನು ತೋರಿ ಚೆನ್ನಾಗಿ ಕಾಣಿಸುತ್ತಿದ್ದ ಮಾವಿನಮರ,ಒಂದು ಮೊದಲು ಅಲ್ಲದೇ ತೂಗುತ್ತಿದ್ದ ಉಯ್ಯಾಲೆಯ ಹೊಸ ಗದ್ದಲ(ಗಾವರ) ಇವೆಲ್ಲವೂ ವಸಂತಮಾಸದ ಪ್ರವೇಶದಲ್ಲಿ ಏನು ರಾಜಿಸುತ್ತದ್ದವೋ! )
(ವಚನಭಾಗದಲ್ಲಿಯೂ ಸ್ವಾರಸ್ಯವಿದ್ದರೂ ಅದನ್ನು  ಸೇರಿಸಿದಾಗ ವಿಸ್ತಾರ ಹೆಚ್ಚುವುದೆಂದು ಹಾಗೆಯೇ ಬಿಡುತ್ತಿದ್ದೇನೆ)

ಚಂ|| ಬಿರಯಿಯ ಮಿೞ್ತುವೆಂ ಮಿದಿದೊಡಲ್ಲದಣಂ ಮುಳಿಸಾಱದೆಂದು ಪ
ಲ್ಮೊರೆದಪನಿಲ್ಲಿ ಮನ್ಮಥನಿದಂ ಪುಗಲಿಂಗಡಿಮೆಂದು ಬೇಟಕಾ|
ಱರನಿರದೂಱ ಸಾಱ ಜಡಿವಂತೆಸೆಗುಂ ಸಹಕಾರ ಕೋಮಳಾಂ
ಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ ನಂದನಂಗಳೊಳ್|| ೧೩||
(ನಂದನವನಗಳಲ್ಲಿ ಮಾವಿನ ಮರದ ಕೋಮಲವಾದ ಅಂಕುರ(ಚಿಗುರು)ಗಳಿಂದ ಪರಿತುಷ್ಟವಾದ ಪರಪುಷ್ಟ(ಕೋಗಿಲೆ)ಗಳ ಧ್ವನಿ-  "ವಿರಹಿಯ ಮೃತ್ಯು ನಾನು, ಅವರನ್ನು ಮಿದಿದು(ಮೆಟ್ಟಿ)ದಲ್ಲದೆ ಕೋಪ ಆರದು ಎಂದು ಹಲ್ಲುಕಡಿಯುತ್ತ ಮನ್ಮಥ ಬೇಟಕಾರ(ಪ್ರಣಯಿ)ಗಳಿಗೆ ಇಲ್ಲಿ ಬರಬೇಡಿ" ಎಂದು ಹೇಳುವಂತೆ ತೋರುತ್ತಿತ್ತು.)
Image result for ಕೋಗಿಲೆ
ಉ|| ಪೋಗದೆ ಪಾಡುತಿರ್ಪಳಿಯೆ ಬೃಂಹಿತಮಾಗಿರೆ ಚಂದ್ರಕಾಂತಿ ಕಾ
ಯ್ಪಾಗಿರೆ ಬೀಸುವೊಂದೆಲರೆ ಬೀಸುವುದಾಗಿರೆ ಕಾಯ್ಗಳಿಂದಮಿಂ|
ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ
ಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ|| ೧೫||
Image result for ದುಂಬಿ
(ಈ ಪದ್ಯದಲ್ಲಿ ವಸಂತ ಒಂದು ಆನೆ ಎಂದು ಸಾವಯವ ರೂಪಕದಲ್ಲಿ ಹೇಳಿದ್ದಾನೆ; ಎಲ್ಲೆಡೆ ಹಾಡುತ್ತಿರುವ ದುಂಬಿಗಳೇ ಆನೆಯ ಬ್ರೂಂಕಾರ, ಚಂದ್ರಕಾಂತಿಯೇ ಉಗ್ರತೆ/ಕೋಪ(?), ಬೀಸುತ್ತಿರುವ ತಂಗಾಳಿಯೇ ಆನೆ ಕಿವಿಗಳನ್ನು ಬೀಸಿದಾಗ ಉಂಟಾಗುವ ಗಾಳಿ ಆಗಿದೆ, ಕಾಯಿಗಳಿಂದ ಅಲ್ಲಲ್ಲಿ ಸೋರುತ್ತಿರುವ ಸೋನೆ(ರಸ) ಆನೆಯ ಮದಧಾರೆಯಾಗಿರಲು, ಮಾವಿನ ಕೋಡು (ಮಾವಿನ ಹೂವು ಕೋಡಿನಂತಿರುತ್ತದೆಯೆಂಬ ಕಾರಣದಿಂದ) ಆನೆಯ ದಂತಗಳು. ಹೀಗೆ ವಸಂತ ಎನ್ನುವ ಆನೆ ವಿಯೋಗಿಗಳನ್ನು ಹರಿದು ಪೀಡಿಸುತ್ತಿತ್ತು)
Image result for indian vasanta seasonಹೀಗೆ ವಸಂತ ಬಂದದ್ದು ಕಂಡು ಮಾದ್ರಿ ವನದಲ್ಲಿ ಆಟವಾಡುವ ಬಯಕೆಯಿಂದ ಹೋಗುತ್ತಾಳೆ ಅವಳು ವಸಂತನ ಕಾಂತೆಯಂತೆ ಕಾಣುತ್ತಾಳೆ ಅವಳು ಹೂವಿನ ತೊಡುಗೆಯನ್ನೇ ತೊಟ್ಟಿದ್ದು ಮನ್ಮಥನ ಹೂಬಾಣಗಳಂತೆ ಕಾಣುತ್ತಿತ್ತು ಹೀಗಿರಲು  

ಚಂ|| ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ
ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ|
ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ
ಬಗೆಯದೆ ಮಿೞ್ತುದೇವತೆಯನೞ್ಕಱಳುರ್ಕೆಯಿನಪ್ಪುವಂತೆವೋಲ್|| ೧೮।।
(ಸೊಗಸಾಗಿ ತೊಟ್ಟ ಹೂವಿನ ತೊಡುಗೆ ಮೆಲ್ಲನೆ ಎದೆಯಲ್ಲಿ ಸೇರಿದರೆ  ಕಣ್ಣುಗಳಲ್ಲಿ ಅನಂಗರಾಗರಸ ಹೊಮ್ಮುವಂತೆ ನೋಡಿ ನೋಡಿ ತಟ್ಟನೆ ಮೇಲೆ ಹಾಯ್ದು ಪಾಂಡು ತನ್ನ ಶಾಪವನ್ನು ನೆನಪಿಸಿಕೊಳ್ಳದೆ ಮೃತ್ಯುದೇವತೆಯನ್ನು ಅಕ್ಕರೆ ಹೆಚ್ಚಾಗಿ ಅಪ್ಪಿಕೊಳ್ಳುವಂತೆ  ಅವಳನ್ನು ಅಪ್ಪಿಕೊಂಡನು.)

ಹಾಗೆ ವಿಷಮ ವಿಷದ ಬಳ್ಳಿಯನ್ನು ಅಪ್ಪಿದಂತೆ ಇದ್ದ ನಲ್ಲಳ ಮೃದು ಮೃಣಾಲ ಸಮನಾದ ಕೋಮಲ ಬಾಹುಪಾಶಗಳೇ ಅವನ ಪಾಲಿಗೆ ಯಮಪಾಶಗಳಂತೆ ಆಯಿತು ಎಂದು ಆ ಪ್ರಸಂಗವನ್ನು ಮುಂದುವರೆಸುತ್ತಾನೆ. 

ಇಲ್ಲಿ ವಸಂತದ ವರ್ಣನೆಯಲ್ಲಿ ಕೂಡ ವಸಂತ ಆನೆಯಂತೆ ವಿಯೋಗಿಗಳನ್ನು ಪೀಡಿಸುವುದು ಹಾಗೇ ಪ್ರಣಯಿಗಳು ಬರಬೇಡಿ ಎಂದು ಸಾರಿ ಹೇಳುವುದು ಇವೆಲ್ಲ ಒಳ್ಳೆಯ ವಿಭಾವಗಳಾಗಿ ಶೃಂಗಾರ ರಸದಿಂದ ಕರುಣಾರಸಕ್ಕೆ ಸಾಗುವಲ್ಲಿ ಸೊಗಸಾಗಿ ಹೊಂದಿಕೊಳ್ಳುತ್ತವೆ.. ಕುಮಾರವ್ಯಾಸನೂ ಇದನ್ನು ಯೋಗಿಗೆತ್ತಿದ ಖದ್ಗಧಾರೆ ಎಂದೆಲ್ಲ ಬಣ್ಣಿಸಿರುವುದನ್ನು ಅವಲೋಕಿಸಬಹುದು. ಹಾಗೆಯೇ ಇಲ್ಲಿ ಸುಂದರಿಯಾದ ಮಾದ್ರಿಯನ್ನು ಮೊದಲು ಮನ್ಮಥನ ಬಾಣಕ್ಕೆ ಆಬಳಿಕ ವಿಷದ ಬಳ್ಳಿಗೆ ಮೃತ್ಯು ದೇವತೆಗೆ ಹೋಲಿಸಿ ಹೇಳಿರುವುದು ಔಚಿತ್ಯಪೂರ್ಣವಾಗಿದೆ.  

ಸೋಮವಾರ, ಮಾರ್ಚ್ 16, 2015

ಸಹೃದಯಕಾಲ-೧೬-ಸೂರ್ಯೋದಯ

ಮಹಾಕಾವ್ಯದಲ್ಲಿ ಯಥೋಚಿತವಾಗಿ ಅಷ್ಟಾದಶವರ್ಣನೆಗಳು ಇರಬೇಕೆಂಬುದು ಹಿಂದಿನಿಂದಿರುವ ನಿಯಮವಷ್ಟೇ ಅಲ್ಲದೆ ಅದು ಕಾವ್ಯಕ್ಕೆ ನಿಜವಾದ ಅಲಂಕಾರವೂ ಅಹುದು. ಈ ಅಷ್ಟಾದಶ ವರ್ಣನೆಗಳಲ್ಲಿ ನಗರ,ಅರ್ಣವ,ಋತು,ಶೈಲ ಇತ್ಯಾದಿಯಾಗಿ ಆಲಂಕಾರಿಕರು ಪಟ್ಟಿ ಮಾಡಿದ್ದಾರಷ್ಟೆ. ಈ ಎಲ್ಲವೂ ಕಥಾವಿಸ್ತಾರಕ್ಕೆ ಅನುಕೂಲವಾಗುವಂತೆ ಅಲ್ಲದೇ ಸಂದರ್ಭಕ್ಕೆ ಯೋಗ್ಯವಾಗಿ ಕಾವ್ಯದಲ್ಲಿ ಬಂದಲ್ಲಿ ಅದಕ್ಕೆ ಸೊಗಸು ಹೆಚ್ಚು. ಉದಾಹರಣೆಗೆ - ಜಲಕ್ರೀಡೆಯ ವರ್ಣನೆ- ಕಾವ್ಯದಲ್ಲಿ ಜಲಕ್ರೀಡಾ ವರ್ಣನೆ ಇರಬೇಕೆಂದು ಯಾರೋ ಜಲಕೇಳಿಯಾಡಿದರೆಂದಲ್ಲಿ ಸ್ವಾರಸ್ಯವಿಲ್ಲ. ಇತ್ತೀಚೆಗೆ ಮಿತ್ರರೊಬ್ಬರ ಜೊತೆ ಮಾತನಾಡುವಾಗ ಇದೇ ಪ್ರಸ್ತಾಪ ಬಂತು- ಅಲ್ಲಿ ಅವರು ಹೇಳಿದ್ದು-ಅಭಿನಂದನ ರಾಮಚರಿತದಲ್ಲಿ-ಜಲಕೇಳಿಯ ವರ್ಣನೆ  ಮಾಡಬೇಕೆಂದು ವೃದ್ಧನಾದ ದಶರಥಮಹಾರಾಜ(ಅದಾಗಲೇ ಅದೆಷ್ಟೋ ಸಾವಿರ ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಎಂದೂ ಹೇಳಿ) ತನ್ನ ರಾಣಿಯರ ಜೊತೆ ಜಲಕೇಳಿಯಾಡಿದ್ದನ್ನು ವರ್ಣಿಸಿದರೆ ಅದನ್ನು ಮೆಚ್ಚಲಾಗುತ್ತದೆಯೇ! ಅಥವಾ ಊಹಿಸಲಾದರೂ ಸಾಧ್ಯವೇ? ಆದರೆ ಕಾಲಿದಾಸನ ರಘುವಂಶಮಹಾಕಾವ್ಯದಲ್ಲಿ ಕೈಸನ್ನೆ ಜಲಕ್ರೀಡೆಯ ವರ್ಣನೆ ಬರುತ್ತದೆ. ಆ ಸಂದರ್ಭದಲ್ಲೇ ಅವನು ಉಂಗುರವನ್ನು ಕಳೆದುಕೊಂಡು ಅದು ಮುಂದಿನ ಕಥಾವಿಸ್ತರಣ ತಂತ್ರವಾಗಿ ಬೆಳೆಯುತ್ತದೆ. ಇದು ಔಚಿತ್ಯಪೂರ್ವಕವಾದ ವರ್ಣನೆ ಎಂದು.
ಕನ್ನಡದ ಹಲವು ಕವಿಗಳು ಎಡವಿರುವುದು ಇಂತಹ ಔಚಿತ್ಯಪ್ರಜ್ಞೆಯ ಕೊರತೆಯಿಂದಲೇ, ಅವರಲ್ಲಿ ಪಂಪ ರನ್ನರೂ ಹೊರತಾಗಿಲ್ಲ ಎಂದಮೇಲೆ ಬಡಪಾಯಿ ಆಂಡಯ್ಯನಾಗಚಂದ್ರ ಮೊದಲಾದವರು ಬದುಕಿಯಾರೇ! ಕುಮಾರವ್ಯಾಸನೊಬ್ಬ ಇಂತಹ ಹಲವರ ಸಾಲಿನಿಂದ ತುಂಬಾ ಮೇಲೇ ಉಳಿಯುತ್ತಾನೆ.(ರಾಘವಾಂಕ ಮೊದಲಾದವರ ಬಗ್ಗೆ ಗೊತ್ತಿಲ್ಲ) ಅಲ್ಲದೇ ಅವನಲ್ಲಿ ಅನೌಚಿತ್ಯ ತುಂಬಾ ಕಡಿಮೆ-ಇಲ್ಲವೆಂದೇ ಹೇಳಬಹುದು. ಏಕೆಂದರೆ ಅವನು ಯಾವುದೇ ಪೂರ್ವಾಗ್ರಹ ಇಲ್ಲದೇ ಬರೆದವನು ಎಂಬುದಂತೂ ಮುಖ್ಯ ಕಾರಣವಾಗುತ್ತದೆ. ಪಂಪರನ್ನಾದಿಗಳಿಗೆ ಆಶ್ರಯದಾತರನ್ನು ಮೆಚ್ಚಿಸುವ ಬಯಕೆಯೇ ಮುಖ್ಯವಾಗುತ್ತದೆ,ಆಂಡಯ್ಯನಂತಹವರಿಗೆ ವೈದಿಕದೇವರಾದ ಶಿವನನ್ನು ಮನ್ಮಥನಿಂದ ಸೋಲಿಸುವುದೇ ಮುಖ್ಯವಾಗುತ್ತದೆ. ನಾಗಚಂದ್ರನಂತಹವರಿಗೆ ರಾವಣನನ್ನು ಒಳ್ಳೆಯವನನ್ನಾಗಿಸುವ ಉದ್ದೇಶವೇ ಕಾಣುತ್ತದೆ. ಕುಮಾರವ್ಯಾಸ 'ಕೃಷ್ಣ ಮೆಚ್ಚಲಿಕೆ'ಬರೆದದ್ದಲ್ಲವೇ!
ಇನ್ನು ಆಧುನಿಕ ಕವಿಗಳ ಕೃತಿಗಳನ್ನು ನೋಡಿದರೆ ನನ್ನ ಅರಿವಿನ ಮಿತಿಯಲ್ಲಿ ಕುವೆಂಪುರವರ ಶ್ರೀರಾಮಾಯಣದರ್ಶನಂ ಒಂದು ಮಹಾಕಾವ್ಯವಾಗಿ ಇದೆ.  ಪ್ರಶಸ್ತಿಗಳು ಬಂದವೆಲ್ಲ ಮಹಾಕಾವ್ಯ ಎಂದು ಹೇಳುವುದನ್ನು ನಾನಂತೂ ಸುತರಾಂ ಒಪ್ಪಲಾರೆ. ಯಾವ ಕೃತಿಯಲ್ಲಿ ಕಾವ್ಯತ್ವ ಸ್ವಲ್ಪವೂ ಇಲ್ಲವೋ ಅದನ್ನು ಕಾವ್ಯ ಎನ್ನುವುದೇ ಕಷ್ಟ, ಇನ್ನು ಮಹಾಕಾವ್ಯ ಎಂದು ಹೇಗೆ ಒಪ್ಪಲಿ!! ಕವೃ-ವರ್ಣನೇ ಎಂಬ ಧಾತುವಿನಿಂದ ಕವಿ-ಕಾವ್ಯ ಎಂಬ ಶಬ್ದಗಳು ಹುಟ್ಟಿದವಂತೆ. ಅಂದರೆ ಒಂದನ್ನು(ವಸ್ತುವನ್ನು) ವರ್ಣಿಸುವುದು ಕವಿತ್ವ ಎಂತಾದರೆ ವರ್ಣನಾಂಶಗಳೇ ಇಲ್ಲದಿದ್ದಲ್ಲಿ ಅದು ಹೇಗೆ ಕಾವ್ಯವಾಗುತ್ತದೆ!
ಕುವೆಂಪು ಅವರ ಕಾವ್ಯ ವರ್ಣನೆಯ ವಿಷಯದಲ್ಲಿ ಹಿಂದೆ ಬೀಳುವುದೇ ಇಲ್ಲ. ಅವರ ವರ್ಣನೆಗೆ ಅವರೇ ಸಾಟಿ. ಹೀಗಿದ್ದರೂ ಹಲವುಕಡೆ ಕಾವ್ಯದೋಷಗಳನ್ನು ಮೀರಿಲ್ಲವೆಂಬುದು ಸ್ವಲ್ಪ ಬೇಸರದ ಸಂಗತಿ. (ಮೊದಲ ಸಾಲಿನಲ್ಲೇ) ವಿಸಂಧಿದೋಷ, ಅರಿಸಮಾಸಗಳು,ವ್ಯಾಕರಣವಿರುದ್ಧಪದಗಳು ಇತ್ಯಾದಿ ಕೆಲವು ಅಲ್ಲಿಲ್ಲಿ ಹಾಗೆ ಹೀಗೆ ಸುಳಿದಾಡಿದರೂ ಕವಿತ್ವದ ಬಿರುಗಾಳಿಯಲ್ಲಿ ಕೊಚ್ಚಿಹೋಗುತ್ತವೆ!
ಅವರ ಮಾತನ್ನೇ ಹೇಳುವುದಾದರೆ- ಕವಿಗೆ ಕರ್ಣಂ ಪ್ರಮಾಣಂ- ವ್ಯಾಕರಣಮಲ್ತು! ವ್ಯಾಕರಣಮೇಕೆಂದೊಡೆ ಮರೆವುದಕೆ ಕಲ್ತು!!"
ಹಾಗಿದ್ದರೂ ದೋಷಗಳನ್ನು ಮೀರಲು ವ್ಯಾಕರಣಾದಿಗಳು ಬೇಕೇ ಬೇಕು ಎಂಬುದಂತೂ ಸತ್ಯ.
ಈವೊತ್ತಿನ ಪದ್ಯ ಕುವೆಂಪು ಅವರದೇ- ಅವರೇ ಹೇಳಿದಂತೆ ಸೂರ್ಯೋದಯಚಂದ್ರೋದಯ ದೇವರ ದಯೆಯೇ ಅಲ್ಲವೇ! ಹಾಗೆ ಶ್ರೀರಾಮಾಯಣದರ್ಶನಂ ಕೃತಿಯಲ್ಲಿ ಶಿಲಾತಪಸ್ವಿನಿ ಸಂಚಿಕೆಯಲ್ಲಿ ಬರುವ ಸೂರ್ಯೋದಯದ ವರ್ಣನೆಯ ಸಂದರ್ಭ- ಅಯೋಧ್ಯೆಯಿಂದ ವಿಶ್ವಾಮಿತ್ರರ ಜೊತೆ ರಾಮಲಕ್ಷ್ಮಣರು ಅವರ ಯಜ್ಞಕ್ಕೆ ಕಾವಲಾಗಲು ಹೊರಟಿರುತ್ತಾರೆ. ಆ ಸಂದರ್ಭದಲ್ಲಿ ಸರಯೂ ನದಿಯ ತೀರದಲ್ಲಿ ರಾತ್ರಿ ಕಳೆದ ಬಳಿಕ ಕಂಡ ದೃಶ್ಯ:-
ಪ್ರಾಚೀದಿಗಂಗನೆಯ ಕಣ್ದೆರಹಿನೊಳಬೆಳಗೊ
ಕನಕಮೇರುವನೇರಿಬಹ ತೇರನೆಳೆಯುತಿಹ
ತಪನಹಯಖುರಪುಟದಿನೆದ್ದ ಹೊಂದೂಳಿಯೋ
ಕತ್ತಲೆಯನಟ್ಟಿ ಬರ್ಪಿನನ ನಾರಾಚದಿಂ
ಗಾಯಗೊಂಡಿರ್ಪಿರುಳ್ ಕಾರ್ದ ನೆತ್ತರ್ ಸೋರ್ವ
ಸೋನೆ ತುಂತುರ್ ಮಳೆಯೊ ಪೇಳೆನಲ್ ಮರುದಿನಂ
ಬೆಳಗಾದುದಿಂದ್ರದಿಕ್ತಟದಿ. ತುಂಬಿತ್ತೊಡನೆ
ವನದೇಶಮಂ ಲಕ್ಷಪಕ್ಷಿಯಲಿ ರಾಜಿಸಿತು
ಸರಯೂ ನದಿಯ ವಕ್ಷಮೋಕುಳಿಯ ಕಾಂತಿಯಿಂ
ತಳಿಸಿ.
(ಪೂರ್ವದಿಕ್ಕೆನ್ನುವ ಸುಂದರಿ ಕಣ್ಣನ್ನು ತೆರೆದಾಗ ಕಂಡ ಕಾಂತಿಯೋ,  ಕನಕಗಿರಿ ಮೇರುವನ್ನು ಹತ್ತಿಬರುತ್ತಿರುವ ಸೂರ್ಯನ ತೇರನ್ನು ಎಳೆಯುತ್ತಿದ್ದ ಕುದುರೆಗಳ ಖುರಪುಟ(ಗೊರಸು)ಗಳಿಂದೆದ್ದ ಬಂಗಾರದ ಬಣ್ಣದ ಧೂಳಿಯೋ, ಕತ್ತಲೆಯನ್ನು ಅಟ್ಟಿ ಬರುತ್ತಿರುವ ಸೂರ್ಯನ ಬಾಣಕ್ಕೆ ತುತ್ತಾಗಿ ಗಾಯಗೊಂಡ ರಾತ್ರಿ ಕಾರುತ್ತಿರುವ ರಕ್ತವೋ ಎಂಬಂತೆ ಇಂದ್ರನ ದಿಕ್ಕಾದ ಪೂರ್ವದಲ್ಲಿ ಮಾರನೆಯ ದಿನ ಬೆಳಗಾದುದು. ಆಗ ವನದಲ್ಲೆಲ್ಲ ಲಕ್ಷಾಂತರ ಪಕ್ಷಿಗಳು ತುಂಬಿಕೊಂಡವು, ಸರಯೂ ನದಿಯ ವಕ್ಷಸ್ಥಳದಲ್ಲಿ ಓಕುಳಿಯ ಬಣ್ಣ ತುಂಬಿಕೊಂಡು ರಾಜಿಸುತ್ತಿತ್ತು)
ಇಂತಹ ಅದ್ಭುತವಾದ ವರ್ಣನೆ ಆ ಸೂರ್ಯೋದಯದೃಶ್ಯದ ಆಸ್ವಾದ ಮಾಡುವಾಗ ಗರಿಗೆದರುವ ಕಲ್ಪನೆ ಇವನ್ನೆಲ್ಲ ಕೇಳಿ-ಓದಿದಾಗ ನಮಗನ್ನಿಸುವುದೂ -ಕವಿವಿಭೂತಿಗೆ ನಮೋ ಕೃತಿವಿಭೂತಿಗೆ ನಮೋ!!

ಸೋಮವಾರ, ಮಾರ್ಚ್ 9, 2015

ಸಹೃದಯಕಾಲ-೧೫-ಮೇಘಸಂದೇಶ

ಸಂಸ್ಕೃತ ಸಾಹಿತ್ಯದ ಪರಿಚಯ ಇರುವವರಿಗಂತೂ ಕಾಲಿದಾಸನ ಸ್ಥಾನ ಏನೆಂಬುದು ತಿಳಿದೇ ಇದೆ. ಉಳಿದ ಭಾರತೀಯರೂ, ಸಂಸ್ಕೃತವನ್ನರಿಯದಿದ್ದವರೂ ಆ ಮಹಾಕವಿಯ ಬಗ್ಗೆ ಸಾಕಷ್ಟು ಕೇಳಿರುತ್ತಾರೆ. ಅಂತಹ ಮಹಾಕವಿಯ ಕಾವ್ಯಗಳ ಸ್ವಾರಸ್ಯವನ್ನು ಎಷ್ಟು ಸವಿದರೂ ಇನ್ನೊಮ್ಮೆ ಸವಿಯಬೇಕೆನಿಸುತ್ತದೆ.ಅವನ  ಏಳುಕಾವ್ಯಗಳನ್ನೂ ಆಮೂಲಾಗ್ರವಾಗಿ ಅಧ್ಯಯನ ಮಾಡಿದವರೆಷ್ಟೋ ವಿದ್ವಾಂಸರಿದ್ದಾರೆ, ಸಹೃದಯರಿದ್ದಾರೆ. ನಾನು ಮೂಲವನ್ನು ಓದಿಕೊಂಡವನಲ್ಲ. ಅವರಿವರು ಹೇಳಿದ್ದನ್ನು ಕೇಳಿಕೊಂಡವನಷ್ಟೆ. ಅವರಷ್ಟು ಚೆನ್ನಾಗಿ ವ್ಯಾಖ್ಯಾನಿಸಬಲ್ಲೆನೆಂದಾಗಲೀ ಅಥವಾ ಮೂಲಕ್ಕೆ ಒಪ್ಪುವಂತೆ ಅರ್ಥ ಹೇಳುತ್ತೇನೆ ಎಂಬ ಭಾವವಾಗಲೀ ಇಲ್ಲ. ಆದರೂ ಸಹೃದಯರಿಗೆ ಸವಿಯಿರುವುದೆಂದು ತೋರಿಸಿಕೊಡಬಲ್ಲೆ . ಇರುವೆಗೆ ಸಕ್ಕರೆಯ ಮೂಟೆಯನ್ನು ತೋರಿಸುವ ಕೆಲಸ ಎಂದುಕೊಳ್ಳಿ ಬೇಕಾದರೆ :-) ಅಲ್ಲದೇ ಇಲ್ಲಿ ಕನ್ನಡಕಾವ್ಯಸ್ವಾರಸ್ಯವಿಸ್ತರಣೆ ಮಾಡುವ ಬಯಕೆ ಇರುವ ಕಾರಣ ಮೂಲಕ್ಕಿಂತ ಅನುವಾದಕ್ಕೆ ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಅನೌಚಿತ್ಯವೇನೂ ಆಗಲಾರದು ಎಂದುಕೊಳ್ಳುತ್ತೇನೆ.
ಸಂದರ್ಭ- ಮೇಘದೂತದಲ್ಲಿ ಯಕ್ಷ ತನ್ನ ಪ್ರಿಯೆಗೆ ಮೇಘದ ಮೂಲಕ ಸಂದೇಶ ಕಳಿಸುತ್ತಾ ಮೇಘಕ್ಕೆ ಮಾರ್ಗವನ್ನು ಸೂಚಿಸುತ್ತಾ ಬೇರೆ ಬೇರೆ ಪ್ರದೇಶಗಳನ್ನು ಅಲ್ಲಿಯ ಜನಜೀವನವನ್ನು ವರ್ಣನೆ ಮಾಡುತ್ತಾ ಸಾಗುತ್ತಾನೆ. ಹೀಗೆ
ಮೇಘಸಂದೇಶದಲ್ಲಿ ಬರುವ ಒಂದು ಪದ್ಯ -

ಕರ್ತುಂ ಯಚ್ಚ ಪ್ರಭವತಿ ಮಹೀಮುಚ್ಛಿಲೀನ್ಧ್ರಾಮವನ್ಧ್ಯಾಂ
ತಚ್ಛ್ರುತ್ವಾ ತೇ ಶ್ರವಣಸುಭಗಂ ಗರ್ಜಿತಂ ಮಾನಸೋತ್ಕಾಃ|
ಆಕೈಲಾಸಾದ್ ಬಿಸಕಿಸಲಯಚ್ಛೇದಪಾಥೇಯವನ್ತಃ
ಸಂಪತ್ಸ್ಯನ್ತೇ ನಭಸಿ ಭವತೋ ರಾಜಹಂಸಾಃ ಸಹಾಯಾಃ||

ಇದನ್ನು ಕನ್ನಡದಲ್ಲಿ ಪ್ರಸಿದ್ಧವಾದ "ಅಂಬಿಕಾತನಯದತ್ತರ ಮೇಘದೂತ"ದಲ್ಲಿ ಹೀಗೆ ಅನುವಾದ ಮಾಡಿದ್ದಾರೆ.

ಮೊದಲ ಮೊಳಗಿಗೇ ಬಂಜುಗೆಟ್ಟಿತೋ ಭೂಮಿ ಅಣಬೆ ತಾಳಿ
ಕಿವಿಗೆ ಸವಿಯೆನಿಪ ಮೊಳಗ ಕೇಳಿ ಮಾನಸಕೆ ಬಂತು ದಾಳಿ
ತುಂಡು ತಾವರೆಯ ಬುತ್ತಿಕಟ್ಟಿ ಕೈಲಾಸಕಾಗಿ ಸಾಗಿ
ಬಾನಬಯಲಿನಲಿ ಕೊನೆಗು ಬರುವವರಸಂಚೆ ಜೋಡಿಯಾಗಿ||
(ಮೊದಲ ಬಾರಿ ಮೊಳಗಿದಾಗಳೇ ಭೂಮಿ ಬಂಜೆತನವನ್ನು ತೊರೆಯಿತು. ಅಣಬೆಗಳು ಬೆಳೆದುವು. ಕಿವಿಗೆ ಸವಿಯೆನಿಸುವ ಗುಡುಗಿನ ದನಿಯನ್ನು ಕೇಳಿ ಮಾನಸಸರೋವರಕ್ಕೆ ದಾಳಿ ಬಂತು; ಅವು ತಾವರೆಯ ಎಸಳುಗಳನ್ನೇ ಬುತ್ತಿಯಂತೆ ಕಟ್ಟಿಕೊಂಡು ಬರುವ ರಾಜಹಂಸಗಳು, ಕೈಲಾಸಕ್ಕಾಗಿ ಸಾಗಿ ಕೊನೆಯವರೆಗೂ ಬಾನಿನ ದಾರಿಯಲ್ಲಿ ಜೊತೆಯಾಗಿ ಬರುತ್ತವೆ)

ಇದನ್ನೇ ಇನ್ನೊಬ್ಬ ಕವಿಗಳಾದ ಶ್ರೀ. ಗಣಪತಿ ಮೊಳೆಯಾರರು ಮೂಲದ ಮಂದಾಕ್ರಾಂತಾಚ್ಛಂದಸ್ಸಿನಲ್ಲಿಯೇ ಹೀಗೆ ಅನುವಾದ ಮಾಡಿದ್ದಾರೆ.

ನಿನ್ನಾರಾವಕ್ಕಣಬೆ ವೆಳೆಗುಂ ಭೂಮಿಸಂಪನ್ನಮಕ್ಕುಂ
ಕೇಳ್ದಾ ಕರ್ಣಕ್ಕನಿದು ದನಿಯಂ ರಾಜಹಂಸಂಗಳೆಲ್ಲಂ
ಪಾರುತ್ತುಂ ಮಾನಸಕೆ ನಭದೊಳ್ ಕೂಡುತೊತ್ತಾಸೆಗೆಂದಾ
ಕೈಲಾಸಂ ಸೇರ್ವನಕ ಬಿಸಪಾಥೇಯಮಂ ತಾಳ್ದಿವರ್ಕುಂ||
(ನಿನ್ನ ಧ್ವನಿಗೆ ಅಣಬೆ ಬೆಳೆಯುವುದು, ಭೂಮಿ ಸಂಪನ್ನವಾಗುತ್ತದೆ. ಕಿವಿಗೆ ಇಂಪಾಗಿರುವ ಆ ದನಿಯನ್ನು ಕೇಳಿ ರಾಜಹಂಸಗಳೆಲ್ಲ ಹಾರುತ್ತಾ ಮಾನಸದೆಡೆಗೆ ಹೊರಟು ಬರುತ್ತವೆ. ಕಮಲದ ಮೊಗ್ಗುಗಳ ಬುತ್ತಿಯನ್ನು ತಮ್ಮೊಡನೆ ಇಟ್ಟುಕೊಂಡ ರಾಜಹಂಸಗಳು ಆಕಾಶದಲ್ಲಿ ಕೈಲಾಸವನ್ನು ಸೇರುವತನಕವೂ ಒತ್ತಾಸೆಯಾಗಿರುತ್ತವೆ. )


ಈ ಎರಡು ಅನುವಾದಗಳನ್ನೂ ಅವಲೋಕಿಸಿದಾಗ ಬೇಂದ್ರೆಯವರ ಅನುವಾದ ಹೊಸಗನ್ನಡದ ತಳಹದಿಯಲ್ಲಿ  ಸುಲಭವೇದ್ಯವಾಗುವಂತಿದೆ ಅಲ್ಲದೇ ಬುತ್ತಿ,ದಾಳಿ,ತುಂಡುತಾವರೆ ಇತ್ಯಾದಿಶಬ್ದಗಳಿಂದ ನಮ್ಮದೇ ಜಾಡಿನದೆಂದು  ಆತ್ಮೀಯವಾಗೆನಿಸುತ್ತದೆ ಎಂಬುದಂತೂ ನಿಜ.
ಮೊಳೆಯಾರರ ಅನುವಾದ ಹಳಗನ್ನಡದಿಂದ ಸಂಪನ್ನವಾಗಿರುವುದಲ್ಲದೇ  ಸಂಸ್ಕೃತಕ್ಕೆ ತುಂಬಾ ಸಮೀಪವಾಗಿದೆ., ಸಂಸ್ಕೃತಶಬ್ದಗಳನ್ನು ಗಂಭೀರವಾದ ವೃತ್ತದಲ್ಲಿ ಹೊಂದಿಸಿಕೊಂಡು ಕಾಲಿದಾಸೀಯವಾಗಿಯೇ ಭಾಸವಾಗುತ್ತದೆ. ಅಲ್ಲದೇ ಮೂಲದ ಛಂದಸ್ಸಿನಲ್ಲಿ ಅನುವಾದ ಮಾಡುವುದು ದುಷ್ಕರವಷ್ಟೇ ಅಲ್ಲದೇ ಭಾವವನ್ನು ತರುವುದೆಷ್ಟು ಕಷ್ಟ ಎಂಬುದು ಅನುಭವವೇದ್ಯವಷ್ಟೆ. ಹಾಗೆಯೇ ಛಂದಸ್ಸಿನ    ಔಚಿತ್ಯದ ವಿಚಾರ ಬಂದಾಗ ಬೇಂದ್ರೆಯವರ ಪದ್ಯ ಸಂತುಲಿತಮಧ್ಯಾವರ್ತಗತಿ ಪ್ರಕೃತ ಸಂದರ್ಭಕ್ಕೆ ಸೂಕ್ತವಾದುದಲ್ಲ ಎಂದು ಛಂದೋವಿದರ ಅಭಿಮತ. ನಮಗೆ ಎರಡೂ ಪದ್ಯಗಳ ಆಸ್ವಾದನೆಯೂ ಸೊಗಸನ್ನು ನೀಡುತ್ತದೆಯೆಂಬುದಂತೂ ನಿಜ!