Powered By Blogger

ಬುಧವಾರ, ಮೇ 6, 2015

ಸಹೃದಯಕಾಲ -೧೮ ಛತ್ರ

ಸಮಾಸಭೂಯಿಷ್ಠವಾದ ಪದ್ಯರಚನೆ ಹಲವು ಕವಿಗಳಿಗೆ ತುಂಬ ಇಷ್ಟವಾದ ಪ್ರಕಾರವಷ್ಟೇ ಅಲ್ಲದೇ ಶೈಲಿಯಲ್ಲಿ ಒಂದು ಬಿಗುವನ್ನಿಡುವ ಕಾರಣ ಅದು ಸಹೃದಯಾನಂದಕರವಾಗಿರುತ್ತದೆ ಕೂಡ. ಆದರೆ ಸುಲಭವೇದ್ಯವಲ್ಲವೆಂಬ ಕಾರಣ ನಾರಿಕೇಳಪಾಕವೆಂದು ಜರಿಯಲೂ ಬಹುದು. ಭಾರತೀಯ ಭಾಷೆಗಳಿಗೆ ಸಮಾಸವೆನ್ನುವುದು ಒಂದು ವರದಾನವೇ ಆಗಿದೆ. ಏಕೆಂದರೆ ಹೀಗೆ ಸಮಸ್ತ ಪದಗಳಲ್ಲಿ ಅದೆಷ್ಟೋ ವಿಸ್ತಾರವಾದ ವಾಕ್ಯವನ್ನೂ ಕೂಡ ಸುಲಭವಾಗಿ ಹೇಳಬಹುದು. ಪ್ರಾಚೀನ ಕವಿಗಳಲ್ಲಿ ತುಂಬಾ ಬಳಕೆಯಾದ ಒಂದು ರೂಪಕವನ್ನೇ ಉದಾಹರಿಸುವುದಾದರೆ- " ಈ ರಾಜನು ಸಮಸ್ತವೈರಿಗಳನ್ನೂ ನಾಶಮಾಡುವವನು" ಎಂಬರ್ಥದಲ್ಲಿ "ರಾಜಂ ರಿಪುಕುಲವಜ್ರಂ" ಎನ್ನಬಹುದು. ಅಲ್ಲಿ ಒಂದು ರೂಪಕವೂ ಇದೆ. ವೈರಿಕುಲಕ್ಕೆ ಇಂದ್ರನ ವಜ್ರಾಯುಧವೇ ಈ ರಾಜ ಎಂದು. ಹಾಗೆ "ಕೌರವ್ಯಗಂಧೇಭಕೇಸರಿ" ಎಂದು ರನ್ನ ಭೀಮನ ಬಗ್ಗೆ ಹೇಳುತ್ತಾನೆ. ದುರ್ಯೋಧನಾದಿಗಳೆಂಬ ಮದ್ದಾನೆಗಳಿಗೆ ಸಿಂಹದಂತೆ ಇದ್ದಾನೆ ಎಂದು. ಇಲ್ಲೆಲ್ಲ ಸಮಸ್ತಪದಗಳನ್ನು ಬಳಸಿದಾಗ ಆದ ವೈಶಿಷ್ಟ್ಯ ಗಮನಾರ್ಹ. ಅಲ್ಲದೇ ಪದಶಿಲ್ಪ ಹಾಗೂ ಬಂಧದ ಬಿಗಿ ಕೂಡ ಸಡಿಲ ಪದಗಳಿಗಿಂತ ಚೆನ್ನಾಗಿರುತ್ತದೆ. 


ಇಂತಹ ಒಂದು ಪದ್ಯ-ಹಿಂದೊಮ್ಮೆ ಶತಾವಧಾನಿ ಡಾ||ಆರ್ ಗಣೇಶ್ ಅವರಿಗೆ ಭಾರತೀಯ ವಿಜ್ಞಾನಮಂದಿರದಲ್ಲಿ ನಡೆದ ಅವಧಾನವೊಂದರಲ್ಲಿ ಕೊಡೆಯ ಬಗ್ಗೆ ಪದ್ಯ ರಚಿಸಲು ಕೇಳಿದಾಗ ಅವರು ಉತ್ತರಿಸಿದ್ದು.

ಸೀಸಪದ್ಯ||
ಮಾರ್ತಂಡಚಂಡಕರಪರಿಮಾರ್ಜನೈಕಘನನೀಲಜೀಮೂತಸಂಕಾಶಕಾಯ
ದುರ್ದಮ್ಯಝಂಝಾನಿಲಪ್ರೋದ್ಧತಪ್ರಾವೃಡಾಘಾತಶಮನಗೋವರ್ಧನಧನ
ಋಣದಾತೃನಿರ್ಘೃಣಾರುಣವೀಕ್ಷಣಾಸಿಹತಿದುರ್ಭೇದ್ಯರಕ್ಷಣಾಫಲಕೋಪಮ
ಮಾರ್ಗಸ್ಥನಿರ್ಣಾಥಸಾರಮೇಯಸಮೂಹಸೇನಾನಿವಾರಣಮಹೇಂದ್ರಾಯುಧ!

ಅಂಬುಜೋಪಮಗಾತ್ರ ಸರ್ವಜನತಾಪ್ತಿಪಾತ್ರ
ಅಬಲಾಕರಾತ್ತನವರಾಗಾನುರಾಗಚೈತ್ರ
ವೃದ್ಧಸಂಧ್ಯಾವಿಹಾರೋಚಿತಾಧಾರವೇತ್ರ
ಎಂತು ಪ್ರಶಂಸಿಪುದು ನಿನ್ನನಾಂ ಮಿತ್ರ ಛತ್ರ!

(ಮಾರ್ತಂಡ ಎಂದರೆ ಸೂರ್ಯನ ಪ್ರಚಂಡವಾದ ಕಿರಣಗಳನ್ನು ತೊಳೆದುಹಾಕುವಂತಹ ಕಪ್ಪಾದ ಮೋಡಗಳಂತೆ ಮೆಯ್ಯಿರುವವನೇ!

ತಡೆಯಲಾರದಂತಹ ಗಾಳಿಬೀಸುತ್ತಾ ಮಳೆ ಬರುವಾಗ ಅದರ ಆಘಾತವನ್ನು ತಡೆಯಲು ಗೋವರ್ಧನಗಿರಿಯಂತೆ ಇರುವವನೆ 

ಸಾಲಕೊಟ್ಟವರ ನಿರ್ಘೃಣವಾದ ದೃಷ್ಟಿಯೆಂಬ ಖಡ್ಗದ ಹೊಡೆತದಿಂದ ತಪ್ಪಿಸಿಕೊಳ್ಳಲು ದುರ್ಭೇದ್ಯವಾದ ರಕ್ಷಣಾಫಲಕದಂತಿರುವವನೇ

ದಾರಿಯಲ್ಲಿರುವ ಯಾವುದೇ ಒಡೆಯನಿಲ್ಲದ ನಾಯಿಗಳ ಸಮೂಹವೆಂಬ ಸೇನೆಯನ್ನು ನಿವಾರಿಸಲು ಇಂದ್ರನ ವಜ್ರಾಯುಧದಂತೆ ಇರುವವನೇ

ಕಮಲದಂತಹ ಮೈಯವನೇ, ಎಲ್ಲ ಜನರಿಗೂ ಆಪ್ತನಾದವನೇ,

ಅಬಲೆಯರ ಕೈಸೇರಿ ಹೊಸ ರಾಗ ಅನುರಾಗದಿಂದ ಚೈತ್ರದಂತಿರುವವನೇ

ವೃದ್ಧರ ಸಂಜೆಯ ವಿಹಾರಕ್ಕೆ ಆಧಾರವಾದ ಬೆತ್ತದಂತಿರುವವನೇ

ನಿನ್ನನ್ನು ಹೇಗೆ ಪ್ರಶಂಸಿಸಲಿ  ಓ ಮಿತ್ರನೇ! ಛತ್ರನೇ!)


ಗಂಭೀರವಾಗಿ ಬಿಸಿಲಿಗೆ ಅಡ್ಡವಾಗುತ್ತದೆ, ನೆರಳುಕೊಡುತ್ತದೆ, ಮಳೆಯಿಂದ ಸಂರಕ್ಷಣೆ ನೀಡುತ್ತದೆ ಇತ್ಯಾದಿ ವಿವರಗಳು ಅಲಂಕಾರಭರಿತವಾಗಿ ಉಚಿತವಾಗಿ ಬಂದಿದೆ.  ಅಲ್ಲದೇ ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಬಳಸುವ ಬಗೆ, ಬೀದಿ ನಾಯಿಗಳನ್ನು ಓಡಿಸಲು ಬಳಸುವುದು ಇಲ್ಲೆಲ್ಲ ಹಾಸ್ಯರಸಲೇಪನವಿದೆ. 


ಇಲ್ಲಿ ಸಮಸ್ತಪದಗಳಲ್ಲಿ ಅವಧಾನಿಗಳು ಕೊಟ್ಟ ಚಿತ್ರಣ ರೂಪಕ ಉಪಮಾ ಮೊದಲಾದ ಅಲಂಕಾರಗಳ ಮೂಲಕ ಅನಿರ್ವಚನೀಯವಾಗಿ ಮೂಡಿ ಬಂದಿದೆ. ಜೊತೆಗೆ ಅನುಪ್ರಾಸಾದಿ ಪ್ರಾಸಾದಿಕ ಗುಣಗಳು ಯಥೋಚಿತವಾಗಿ ಎಲ್ಲ ಸಾಲುಗಳಲ್ಲಿಯೂ ಇದೆ. ಕೊನೆಗೆ "ಮಿತ್ರ ಛತ್ರ" ಎಂಬ ಛೇಕಾನುಪ್ರಾಸ ಕೂಡ ಇದೆ. ಅದನ್ನೂ ಸಮಾಸವನ್ನಾಗಿ ಮಾಡಿದರೆ ಸ್ವಂತದ್ದಲ್ಲದೆ ಬೇರೆಯ ಮಿತ್ರರ ಬಳಿ ಎರವಲು ಪಡೆದುಕೊಂಡ ಕೊಡೆ' ಎಂದು ಅರ್ಥೈಸಿ ಇನ್ನಷ್ಟು ಹಾಸ್ಯಕ್ಕೆ ಅವಕಾಶ ಮಾಡಿಕೊಳ್ಳಬಹುದು.  

ಒಟ್ಟಾರೆ ರಸಿಕರ ಆಸ್ವಾದನೆಗೆ "ಇಲ್ಲುಂಟು ಅನಂತ ಅವಕಾಶ"...